ಸ್ಯಾಂಡಲ್ ವುಡ್ ಗೆ ಅನುರಾಗ್ ಕಶ್ಯಪ್ ಎಂಟ್ರಿ!

‘8’ರ ಹಿಂದೆ ಬಿದ್ದ ಬಾಲಿವುಡ್ ಸ್ಟಾರ್ ಡೈರೆಕ್ಟರ್…
ಸುಜಯ್ ಶಾಸ್ತ್ರೀ ನಿರ್ದೇಶನದ ‘8’ ಚಿತ್ರದಲ್ಲಿ ಅನುರಾಗ್ ಕಶ್ಯಪ್ ಅಭಿನಯ
ಚಂದನವನದ ಅಂಗಳಕ್ಕೆ ಬಂದರು ಬಾಲಿವುಡ್ ತಾರಾ ನಿರ್ದೇಶಕ
ಇತ್ತೀಚಿನ ವರ್ಷಗಳಲ್ಲಿ ಬಾಲಿವುಡ್‌ನ ಅನೇಕ ತಾರೆಯರು ದಕ್ಷಿಣ ಸಿನಿರಂಗದತ್ತ ಒಬ್ಬೊಬ್ಬರಾಗಿ ಹೆಜ್ಜೆ ಹಾಕುತ್ತಿರುವುದು ಹೊಸ ವಿಷಯವಲ್ಲ. ಈಗಾಗಲೇ ಅನೇಕ ಸಿನಿ ಮೇಕರ್ಸ್, ಸ್ಟಾರ್ಸ್ ಕಾಲಿವುಡ್, ಸ್ಯಾಂಡಲ್ ವುಡ್, ಟಾಲಿವುಡ್ ನಲ್ಲಿ ಧೂಳ್ ಎಬ್ಬಿಸುತ್ತಿದ್ದಾರೆ. ಇದೀಗ ಈ ಸಾಲಿಗೆ ಹೊಸ ಸೇರ್ಪಡೆ ಬಾಲಿವುಡ್ ಖ್ಯಾತ ನಿರ್ದೇಶಕ ಕಂ ನಿರ್ದೇಶಕ ಅನುರಾಗ್ ಕಶ್ಯಪ್.
ಕೆಲ ವರ್ಷಗಳ ಹಿಂದೆಯೇ ಅನುರಾಗ್ ಕಶ್ಯಪ್ ದಕ್ಷಿಣದ ಕಡೆಗೆ ಬಂದಿದ್ದು ನಿಮಗೆ ಗೊತ್ತಿರಬಹುದು. ಈಗಾಗಲೇ ಅನುರಾಗ್ ಕಶ್ಯಪ್ ತಮಿಳಿನ ‘ಮಹಾರಾಜ’ ಚಿತ್ರದಲ್ಲಿ ಅದ್ಭುತ ಪಾತ್ರದಲ್ಲಿ ಗಮನ ಸೆಳೆದಿದ್ದಾರೆ. ಈ ಮೂಲಕ ತಮಿಳು ಪ್ರೇಕ್ಷಕರನ್ನ ರಂಜಿಸಿದ್ದಾರೆ. ಅದಾದ ಬಳಿಕ ತೆಲುಗಿನ ‘ಡಕಾಯಿತ್’ ಚಿತ್ರದಲ್ಲಿ ಕಪಟ ಪೊಲೀಸ್ ಆಫೀಸರ್ ನಟಿಸಿರುವ ಅವರೀಗ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದಾರೆ. ಹಾಸ್ಯ ನಟ-ನಿರ್ದೇಶಕ ಸುಜಯ್ ಶಾಸ್ತ್ರಿ ನಿರ್ದೇಶನದ ಹೊಸ ಚಿತ್ರದಲ್ಲಿ ಅನುರಾಗ್ ಕಶ್ಯಪ್ ಹೊಸತರದ ಪಾತ್ರದಲ್ಲಿ ಕನ್ನಡ ಪ್ರೇಕ್ಷಕರ ಮುಂದೆ ಬರಲು ತಯಾರಾಗಿದ್ದಾರೆ.
‘8’ ಸಿನೆಮಾದಲ್ಲಿ ಅನುರಾಗ್ ನಟನೆ
ಕನ್ನಡದ ‘8’ ಎಂಬ ಚಿತ್ರದಲ್ಲಿ ಅನುರಾಗ್ ಕಶ್ಯಪ್ ನಟಿಸುತ್ತಿದ್ದಾರೆ. ಹಾಸ್ಯನಟ ಸುಜಯ್ ಶಾಸ್ತ್ರೀ ಈ ಚಿತ್ರದ ಸಾರಥಿ. ‘8’ ಸಿನೆಮಾದ ಟೈಟಲ್ ಲಾಂಚ್ ಕಾರ್ಯಕ್ರಮ ಇತ್ತೀಚೆಗೆ ಬೆಂಗಳೂರಿನಲ್ಲಿ ಅದ್ಧೂರಿಯಾಗಿ ನಡೆಯಿತು. ಈ ವೇಳೆ ನಿರ್ದೇಶಕ ಕಂ ನಟ ಅನುರಾಗ್ ಕಶ್ಯಪ್ ಮಾತನಾಡಿ, ‘ಇದೊಂದು ಎಮೋಷನಲ್ ಕಥೆ. ಜೀವನ ಎಲ್ಲರಿಗೂ ಎರಡನೇ ಅವಕಾಶ ನೀಡುತ್ತದೆ. ಈ ಚಿತ್ರ ಕೂಡ ಅದನ್ನೇ ಹೇಳುತ್ತದೆ. ಅರವಿಂದ್ ಹಾಗೂ ಸುಜಯ್ ಶಾಸ್ತ್ರೀಗೆ ಧನ್ಯವಾದ. ಹೊಸ ಕನ್ನಡ ಸಿನೆಮಾದ ಬಗ್ಗೆ ಸಾಕಷ್ಟು ನಿರೀಕ್ಷೆಯಿದೆ’ ಎಂದರು. ‘ಎವಿಆರ್ ಎಂಟರ್‌ಟೈನ್‌ಮೆಂಟ್’ ಬ್ಯಾನರ್ ಅಡಿಯಲ್ಲಿ ಅರವಿಂದ್ ವೆಂಕಟೇಶ್ ರೆಡ್ಡಿ ಚಿತ್ರಕ್ಕೆ ಹಣ ಹೂಡುತ್ತಿದ್ದಾರೆ. ಫುಟ್‌ಬಾಲ್ ಆಟದ ಸುತ್ತ ನಡೆಯುವ ಕಥೆ ‘8’ ಚಿತ್ರದಲ್ಲಿದೆ.
ಕ್ರೀಡಾ ಕಥಾಹಂದರದ ‘ಎವಿಆರ್ ಪ್ರೊಡಕ್ಷನ್’ ಚೊಚ್ಚಲ ಚಿತ್ರ ‘8’
ಕನ್ನಡ ಚಿತ್ರರಂಗಕ್ಕೆ ಸದಾ ಅಭಿರುಚಿ ಸಿನೆಮಾಗಳನ್ನು ನೀಡುವ ಉದ್ದೇಶದಿಂದ ಶುರುವಾಗಿರುವ ‘ಎವಿಆರ್’ ಚೊಚ್ಚಲ ಕಾಣಿಕೆ ‘8’. ಅರವಿಂದ್ ರೆಡ್ಡಿ ನಿರ್ಮಾಣದಲ್ಲಿ ಈ ಸಿನೆಮಾ ಮೂಡಿ ಬರಲಿದೆ. ಈ ಚಿತ್ರದ ಜೊತೆಗೆ ಸಿಂಪಲ್ ಸುನಿ ಜೊತೆಗೂ ‘ಎವಿಆರ್’ ಕೈ ಜೋಡಿಸಿದೆ. ‘ಬಿಗ್ ಬಾಸ್’ ಖ್ಯಾತಿಯ ಮಹೇಶ್ ಕಾರ್ತಿಕ್ ನಾಯಕನಾಗಿ ನಟಿಸಲಿರುವ ಈ ಸಿನೆಮಾ ಈಗಾಗಲೇ ಘೋಷಣೆಯಾಗಿದೆ. ಸದ್ಯ ‘8’ ಸಿನೆಮಾದ ಚಿತ್ರೀಕರಣ ಬೆಂಗಳೂರಿನಲ್ಲಿ ಭರದಿಂದ ಸಾಗುತ್ತಿದೆ. ಎಲ್ಲ ಅಂದುಕೊಂಡಂತೆ ನಡೆದರೆ, ಈ ವರ್ಷದ ಕೊನೆಗೆ ‘8’ ಸಿನೆಮಾ ತೆರೆಗೆ ಬರುವ ಸಾಧ್ಯತೆಯಿದೆ ಎನ್ನಲಾಗಿದೆ.