ನಿರಂಜನ್ ಸುಧೀಂದ್ರ ಹೊಸಚಿತ್ರ ‘ಸ್ಪಾರ್ಕ್’ಗೆ ಮುಹೂರ್ತ

ಸೆಟ್ಟೇರಿದ ‘ಸ್ಪಾರ್ಕ್’ನಲ್ಲಿ ನಿರಂಜನ್ ಸುಧೀಂದ್ರ ಜರ್ನಲಿಸ್ಟ್!
ಉಪ್ಪಿ ಅಣ್ಣನ ಮಗನ ಹೊಸ ಸಿನೆಮಾ ಘೋಷಣೆ…
ನಿರಂಜನ್ ಸುಧೀಂದ್ರ ಹೊಸ ಸಿನೆಮಾಗೆ ಮಹಾಂತೇಶ್ ಹಂದ್ರಾಳ್ ಆಕ್ಷನ್-ಕಟ್
ಸ್ಯಾಂಡಲ್‌ವುಡ್‌ನ ಭರವಸೆಯ ನಾಯಕ ನಟರಾಗುವ ನಿರೀಕ್ಷೆ ಹುಟ್ಟಿಸಿರುವ ಉಪ್ಪಿ ಅವರ ಸಹೋದರನ ಪುತ್ರ ನಿರಂಜನ್ ಸುಧೀಂದ್ರ ಹೊಸ ಸಿನೆಮಾ ‘ಸ್ಪಾರ್ಕ್’. ಬೆಂಗಳೂರಿನ ಮಹಾಲಕ್ಷ್ಮಿ ಲೇಔಟ್ ನಲ್ಲಿರುವ ಶ್ರೀ ಪ್ರಸನ್ನ ವೀರಾಂಜನೇಯ ಸ್ವಾಮಿ ದೇಗುಲದಲ್ಲಿ ಚಿತ್ರದ ಮುಹೂರ್ತ ನೆರವೇರಿದೆ. ‘ಸ್ಪಾರ್ಕ್’ ಚಿತ್ರಕ್ಕೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಸಹೋದರ, ಎಂಎಲ್ ಸಿ ಆಗಿರುವ ಚನ್ನರಾಜ್ ಹಟ್ಟಿಹೊಳಿ ಕ್ಲ್ಯಾಪ್ ಮಾಡಿದರು. ಉದ್ಯಮಿ ಅಂಕಿತಾ ವಸಿಷ್ಠ ಕ್ಯಾಮೆರಾಗೆ ಚಾಲನೆ ಕೊಟ್ಟರು. ಡಾರ್ಲಿಂಗ್ ಕೃಷ್ಣ, ಮಿಲನಾ ನಾಗರಾಜ್ ಹಾಗೂ ನವೀನ್ ಶಂಕರ್ ವಿಶೇಷ ಅತಿಥಿಯಾಗಿ ಆಗಮಿಸಿ ಇಡೀ ‘ಸ್ಪಾರ್ಕ್’ ಚಿತ್ರತಂಡಕ್ಕೆ ಶುಭಾಶಯ ತಿಳಿಸಿದರು.
‘ಸ್ಪಾರ್ಕ್’ ಕಥೆಯಲ್ಲಿ ಚಿಕ್ಕ ಕಿಡಿ ಇದೆ..!
ಚಿತ್ರದ ಮುಹೂರ್ತ ನೆರವೇರಿದ ಬಳಿಕ ಮಾತನಾಡಿದ ನಟ ನಿರಂಜನ್ ಸುಧೀಂದ್ರ, ‘ಈ ಸಿನೆಮಾಗಾಗಿ ಮಹಾಂತೇಶ್ ಒಂದು ಅದ್ಭುತ ಕಥೆ ಬರೆದಿದ್ದಾರೆ. ‘ಸ್ಪಾರ್ಕ್’ ಅಂದರೆ ಪ್ರೆಸ್. ಅವರಿಗೆ ಇರುವ ‘ಸ್ಪಾರ್ಕ್’ ಇನ್ಯಾರಿಗೂ ಇರುವುದಿಲ್ಲ. ಯಾವುದೇ ವಿಷಯದ ಬಗ್ಗೆ ಮೊದಲು ಕಿಡಿ ಹತ್ತಿಸುವವರು ಅವರೇ. ನಮ್ಮ ಕಥೆಯಲ್ಲಿ ಚಿಕ್ಕ ಕಿಡಿ ಇದೆ. ಅದನ್ನು ‘ಸ್ಪಾರ್ಕ್’ ಚಿತ್ರದ ಮೂಲಕ ಅದ್ಭುತವಾಗಿ ಹೇಳಲು ಹೊರಟ್ಟಿದ್ದಾರೆ. ಸಿನೆಮಾದಲ್ಲಿ ನಾನು ಅಭಿರಾಮ್ ಎಂಬ ಜರ್ನಲಿಸ್ಟ್ ಪಾತ್ರ ಮಾಡುತ್ತಿದ್ದೇನೆ. ಈ ಚಿತ್ರಕ್ಕೆ ಇಬ್ಬರು ನಿರ್ಮಾಪಕರು ಸಾಥ್ ಕೊಟ್ಟಿದ್ದಾರೆ. ‘ಸ್ಪಾರ್ಕ್’ ಸಿನೆಮಾದ ಭಾಗವಾಗುತ್ತಿರುವುದು ಖುಷಿ ಕೊಟ್ಟಿದೆ’ ಎಂದರು.
‘ಸ್ಪಾರ್ಕ್’ನಲ್ಲಿ ಕನಸು ನನಸಾಗಿದೆ…
ಮುಹೂರ್ತದ ಬಳಿಕ ನಿರ್ಮಾಪಕಿ ಗರಿಮಾ ಮಾತನಾಡಿ, ‘ನನ್ನ ಕನಸು ನನಸಾಗಿದೆ. ಬಹಳ ಖುಷಿಯಾಗುತ್ತಿದೆ. ನಾನು ಮ್ಯೂಸಿಕ್ ಆಲ್ಬಂ ಮಾಡಬೇಕು ಎಂದುಕೊಂಡಿದ್ದೇನೆ ಎಂದಾಗ ನನ್ನ ಕುಟುಂಬ ಸಿನೆಮಾ ಮಾಡೋಲ್ವಾ ಎಂದರು. ಇಂದು ನನ್ನ ಕುಟುಂಬದ ಬೆಂಬಲದಿಂದ ನಾನು ಇವತ್ತು ಮೊದಲ ಚಿತ್ರ ಮಾಡುತ್ತಿದ್ದೇನೆ. ಒಂದೊಳ್ಳೆ ತಂಡದ ಜೊತೆ ಕೆಲಸ ಮಾಡುತ್ತಿರುವುದು ಖುಷಿ ಕೊಟ್ಟಿದೆ’ ಎಂದು ಸಂತಸ ಹಂಚಿಕೊಂಡರು.
ಡಿ. ಮಹಾಂತೇಶ್ ಹಂದ್ರಾಳ್ ಡೈರೆಕ್ಟರ್…
‘ಜೇಮ್ಸ್’, ‘ಭರಾಟೆ’, ‘ಕನಕ’ ಸೇರಿದಂತೆ 15ಕ್ಕೂ ಹೆಚ್ಚು ಸಿನೆಮಾಗಳಲ್ಲಿ ಕೋ-ಡೈರೆಕ್ಟರ್ ಆಗಿ ದುಡಿದಿರುವ ಡಿ. ಮಹಾಂತೇಶ್ ಹಂದ್ರಾಳ್ ಡೈರೆಕ್ಟರ್ ಕುರ್ಚಿ ಅಲಂಕರಿಸುತ್ತಿದ್ದಾರೆ. ಚೇತನ್ ಕುಮಾರ್, ಆರ್. ಚಂದ್ರು ಅವರ ಗರಡಿಯಲ್ಲಿ ನಿರ್ದೇಶನದ ಪಟುಗಳನ್ನು ಕಲಿತಿರುವ ಮಹಾಂತೇಶ್ ಈಗ ಪೂರ್ಣ ಪ್ರಮಾಣದ ನಿರ್ದೇಶಕರಾಗಿ ಮೊದಲ ಹೆಜ್ಜೆ ಇಡುತ್ತಿದ್ದಾರೆ. ಅವರ ಚೊಚ್ಚಲ ಪ್ರಯತ್ನದಲ್ಲಿ ನಾಯಕನಾಗಿ ನಿರಂಜನ್ ಸುಧೀಂದ್ರ ಅಭಿನಯಿಸುತ್ತಿದ್ದಾರೆ. ಮುಹೂರ್ತ ನೆರವೇರಿದ ಬಳಿಕ ನಿರ್ದೇಶಕರಾದ ಮಹಾಂತೇಶ್ ಹಂದ್ರಾಳ್ ಮಾತನಾಡಿ, ”ಸ್ಪಾರ್ಕ್’ ನನ್ನ ಮೊದಲ ಸಿನೆಮಾ. ಇದೇ ತಿಂಗಳಾಂತ್ಯಕ್ಕೆ ಶೂಟಿಂಗ್ ಹೋಗುತ್ತಿದ್ದೇವೆ. ಬಹುತೇಕ ಶೂಟಿಂಗ್ ಬೆಂಗಳೂರಿನಲ್ಲಿಯೇ ಇರುತ್ತದೆ’ ಎಂದರು.
ನೈಜ ಘಟನೆಯಿಂದ ಸ್ಫೂರ್ತಿ ಪಡೆದಿರುವ ಸಿನೆಮಾ..!
ಡಿ. ಮಹಾಂತೇಶ್ ಹಂದ್ರಾಳ್ ಆಕ್ಷನ್-ಥ್ರಿಲ್ಲರ್ ಕಥೆಯನ್ನು ಎಣೆದಿದ್ದಾರೆ. ನೈಜ ಘಟನೆಯಿಂದ ಸ್ಫೂರ್ತಿ ಪಡೆದಿರುವ ಈ ಸಿನೆಮಾ ಮೂಲಕ ಕನ್ನಡ ಚಿತ್ರರಂಗಕ್ಕೆ ಹೊಸ ನಿರ್ಮಾಪಕರ ಆಗಮನವಾಗುತ್ತಿದೆ. ಮಹಾಂತೇಶ್ ವಿಷನ್ ಗೆ ಡಾ. ಗರಿಮಾ ಅವಿನಾಶ್ ವಸಿಷ್ಠ ಸಾಥ್ ಕೊಡುತ್ತಿದ್ದಾರೆ. ಸಾಫ್ಟ್‌ವೇರ್ ಉದ್ಯೋಗಿಯಾಗಿರುವ ಅವಿನಾಶ್, ‘ಗರಿಮಾ ಅವಿನಾಶ್ ಪ್ರೊಡಕ್ಷನ್’ ಎಂಬ ನಿರ್ಮಾಣ ಸಂಸ್ಥೆ ಪ್ರಾರಂಭಿಸಿದ್ದಾರೆ. ಈ ಸಂಸ್ಥೆಯ ಪ್ರಪ್ರಥಮ ಸಿನೆಮಾವನ್ನು ನಿರಂಜನ್ ಸುಧೀಂದ್ರಗೆ ನಿರ್ಮಾಣ ಮಾಡುತ್ತಿದ್ದಾರೆ. ‘ಸ್ಪಾರ್ಕ್’ ಸಿನೆಮಾಗೆ ನಾಯಕಿಯಾಗಿ ರಚನಾ ಇಂದರ್ ಸಾಥ್ ಕೊಡುತ್ತಿದ್ದಾರೆ. ಇನ್ನು, ಅನುಭವಿ ತಾಂತ್ರಿಕ ವರ್ಗ ‘ಸ್ಪಾರ್ಕ್’ ಚಿತ್ರದಲ್ಲಿದೆ. ಅಶ್ವಿನ್ ಕೆನಡಿ ಛಾಯಾಗ್ರಹಣ, ಸಚಿನ್ ಬಸ್ರೂರ್ ಸಂಗೀತ ನಿರ್ದೇಶನ, ಮಧು ಸಂಕಲನ ‘ಸ್ಪಾರ್ಕ್’ ಚಿತ್ರಕ್ಕಿದೆ. ಈ ತಿಂಗಳಾಂತ್ಯಕ್ಕೆ ‘ಸ್ಪಾರ್ಕ್’ ಚಿತ್ರತಂಡ ಶೂಟಿಂಗ್ ಅಖಾಡಕ್ಕೆ ಇಳಿಯಲಿದ್ದು , ಬೆಂಗಳೂರು ಸುತ್ತಮುತ್ತ ‘ಸ್ಪಾರ್ಕ್’ ಚಿತ್ರೀಕರಣ ನಡೆಸಲು ಚಿತ್ರತಂಡ ಯೋಜನೆ ಹಾಕಿಕೊಂಡಿದೆ.