‘ಅಜ್ಞಾತವಾಸಿ’ಯ ಮೊದಲ ಮಧುರ ಗೀತೆ ಅನಾವರಣ…

‘ನಗುವಿನ ನೇಸರ…’ ಮೆಲೋಡಿ ಗೀತೆ ಬಿಡುಗಡೆ
‘ಅಜ್ಞಾತವಾಸಿ’ಯ ಮಧುರ ಹಾಡಿಗೆ ಮೆಲ್ಲನೆ ಹೆಜ್ಜೆ ಹಾಕಿದ ಪವನಾ ಗೌಡ
ತೆರೆಗೆ ಬರಲು ತಯಾರಾದ ಹೇಮಂತ್ ರಾವ್ ನಿರ್ಮಾಣದ ‘ಅಜ್ಞಾತವಾಸಿ’
ನಿರ್ದೇಶಕ ಹೇಮಂತ್ ರಾವ್ ಇದೀಗ ಪೂರ್ಣ ಪ್ರಮಾಣದಲ್ಲಿ ನಿರ್ಮಾಪಕರಾಗಿದ್ದು, ತಮ್ಮ ‘ದಾಕ್ಷಾಯಿಣಿ ಟಾಕೀಸ್’ ಪ್ರೊಡಕ್ಷನ್ ಹೌಸ್ ನಡಿ ನಿರ್ಮಿಸಿರುವ ಚೊಚ್ಚಲ ಸಿನೆಮಾ ‘ಅಜ್ಞಾತವಾಸಿ’ ಬಿಡುಗಡೆಗೆ ಸಜ್ಜಾಗಿದ್ದಾರೆ. ಈಗಾಗಲೇ ‘ಅಜ್ಞಾತವಾಸಿ’ ಸಿನೆಮಾದ ಬಹುತೇಕ ಕೆಲಸಗಳು ಪೂರ್ಣಗೊಂಡಿದ್ದು, ಇದೇ ಏಪ್ರಿಲ್ 11ಕ್ಕೆ ‘ಅಜ್ಞಾತವಾಸಿ’ ಅದ್ಧೂರಿಯಾಗಿ ರಾಜ್ಯಾದ್ಯಂತ ತೆರೆಗೆ ಬರುತ್ತಿದೆ. ಸದ್ಯ ‘ಅಜ್ಞಾತವಾಸಿ’ ಚಿತ್ರದ ಪ್ರಚಾರ ಕಾರ್ಯಗಳಲ್ಲಿ ನಿರತವಾಗಿರುವ ಹೇಮಂತ ರಾವ್ ಮತ್ತು ಚಿತ್ರತಂಡ, ಇದೀಗ ಈ ಸಿನೆಮಾದ ಮೆಲೋಡಿ ಹಾಡನ್ನು ಬಿಡುಗಡೆ ಮಾಡಿದೆ. ‘ಸರಿಗಮ ಕನ್ನಡ’ ಯೂ-ಟ್ಯೂಬ್ ಚಾನೆಲ್‌ನಲ್ಲಿ ‘ಅಜ್ಞಾತವಾಸಿ’ ಸಿನೆಮಾದ ‘ನಗುವಿನ ನೇಸರ…’ ಎಂಬ ಮೆಲೋಡಿ ಗೀತೆಯನ್ನು ಅನಾವರಣ ಮಾಡಲಾಗಿದೆ. ಪ್ರಮೋದ್ ಮರವಂತೆ ಸಾಹಿತ್ಯದ ಈ ಹಾಡಿಗೆ ಸುನಿಧಿ ಗಣೇಶ್ ಧ್ವನಿಯಾಗಿದ್ದು, ಚರಣ್ ರಾಜ್ ಸಂಗೀತ ಸಂಯೋಜನೆಯಲ್ಲಿ ಈ ಗೀತೆ ಮೂಡಿಬಂದಿದೆ. ಇನ್ನು ಈ ‘ನಗುವಿನ ನೇಸರ…’ ಹಾಡಿನಲ್ಲಿ ಪವನಾ ಗೌಡ ಮಲೆನಾಡಿನ ಹುಡುಗಿಯಾಗಿ ಮಿಂಚಿದ್ದಾರೆ. ಸದ್ಯ ಬಿಡುಗಡೆಯಾಗಿರುವ ‘ಅಜ್ಞಾತವಾಸಿ’ ಸಿನೆಮಾದ ಈ ಮೆಲೋಡಿ ಹಾಡು ಸೋಶೀಯಲ್ ಮೀಡಿಯಾದಲ್ಲಿ ನಿಧಾನವಾಗಿ ಕೇಳುಗರ ಗಮನ ಸೆಳೆಯುತ್ತಿದೆ.
ರಂಗಾಯಣ ರಘು – ಪಾವನಾ ಗೌಡ ಮುಖ್ಯಭೂಮಿಕೆ…
‘ಅಜ್ಞಾತವಾಸಿ’ ಚಿತ್ರಕ್ಕೆ ‘ಗುಳ್ಟು’ ಸಾರಥಿ ಜನಾರ್ಧನ್ ಚಿಕ್ಕಣ್ಣ ಆಕ್ಷನ್-ಕಟ್ ಹೇಳಿದ್ದಾರೆ. ಈಗಾಗಲೇ ಟೀಸರ್ ಒಳ್ಳೆ ರೆಸ್ಪಾನ್ಸ್ ಸಿಕ್ಕಿದ್ದು, ಈಗ ಹಾಡುಗಳ ಸರದಿ. ರಂಗಾಯಣ ರಘು ಮುಖ್ಯ ಭೂಮಿಕೆಯಲ್ಲಿ ಅಭಿನಯಿಸಿರುವ ‘ಅಜ್ಞಾತವಾಸಿ’ಯಲ್ಲಿ ಪಾವನ ಗೌಡ ಹಾಗೂ ಸಿದ್ದು ಮೂಲಿಮನಿ, ಶರತ್ ಲೋಹಿತಾಶ್ವ, ರವಿಶಂಕರ್ ಗೌಡ ಸೇರಿದಂತೆ ಹಲವರು ನಟಿಸಿದ್ದಾರೆ. ಕೃಷ್ಣರಾಜ್ ‘ಅಜ್ಞಾತವಾಸಿ’ ಚಿತ್ರಕ್ಕೆ ಕಥೆ ಬರೆದ್ದಾರೆ. ಅದ್ವೈತ ಛಾಯಾಗ್ರಾಹಕರಾಗಿ ಹಾಗೂ ಚರಣ್ ರಾಜ್ ಸಂಗೀತ ನಿರ್ದೇಶಕರಾಗಿ, ಭರತ್ ಎಂ. ಸಿ ಸಂಕಲನಕಾರರಾಗಿ, ಉಲ್ಲಾಸ್ ಹೈದೂರು ಕಲಾ ನಿರ್ದೇಶಕರಾಗಿ ‘ಅಜ್ಞಾತವಾಸಿ’ ಚಿತ್ರದಲ್ಲಿ ಕಾರ್ಯನಿರ್ವಾಹಿಸಿದ್ದಾರೆ. ಎನ್. ಹರಿಕೃಷ್ಣ ಸಹ ನಿರ್ದೇಶಕರಾಗಿ ದುಡಿದಿದ್ದು, ಜಿ. ಬಿ. ಭರತ್ ಕಾರ್ಯಕಾರಿ ನಿರ್ಮಾಪಕರಾಗಿ ಸಾಥ್ ಕೊಟ್ಟಿದ್ದಾರೆ.
‘ಅಜ್ಞಾತವಾಸಿ’ ಸಿನೆಮಾದ ‘ನಗುವಿನ ನೇಸರ…’ ಹಾಡಿನ ಲಿರಿಕಲ್ ವಿಡಿಯೋವನ್ನು ವೀಕ್ಷಿಸಲು ಈ ಕೆಳಗಿನ ಲಿಂಕ್ ಅನ್ನು ಕ್ಲಿಕ್ ಮಾಡಬಹುದು…
ಮಲೆನಾಡಿನಲ್ಲಿ ನಡೆದ ಮರ್ಡರ್ ಮಿಸ್ಟರಿ!
1997ರಲ್ಲಿ ಮಲೆನಾಡಿನಲ್ಲಿ ನಡೆದ ಕೊಲೆಯೊಂದರ ಸುತ್ತ ಈ ಕಥೆ ಹೆಣೆಯಲಾಗಿದೆ. ಕನ್ನಡದಲ್ಲಿ ಈವರೆಗೂ ಬಂದಿರದ ಮರ್ಡರ್ ಮಿಸ್ಟರಿ ಕಥಾಹಂದರ ಚಿತ್ರದಲ್ಲಿದೆ. ಈಗಾಗಲೇ ತನ್ನ ಟೈಟಲ್, ಸಬ್ಜೆಕ್ಟ್ ಮೂಲಕ ಒಂದಷ್ಟು ಭರವಸೆ ಮೂಡಿಸಲು ಯಶಸ್ವಿಯಾಗಿರುವ ‘ಅಜ್ಞಾತವಾಸಿ’ ತೆರೆಮೇಲೆ ಹೇಗೆ ಮೂಡಿಬಂದಿದೆ ಎಂಬ ಕುತೂಹಲಕ್ಕೆ ಏಪ್ರಿಲ್ ವೇಳೆಗೆ ಉತ್ತರ ಸಿಗಲಿದೆ.