Quick ಸುದ್ದಿಗೆ ಒಂದು click

‘ಮಂಡ್ಯದ ಗಂಡು’ ಖ್ಯಾತಿಯ ಚಿತ್ರ ನಿರ್ದೇಶಕ ಎ. ಟಿ. ರಘು ನಿಧನ

ಅನಾರೋಗ್ಯದಿಂದ ಬಳಲುತ್ತಿದ್ದ ಹಿರಿಯ ನಿರ್ದೇಶಕ, ಬರಹಗಾರ ಎ. ಟಿ. ರಘು ಇನ್ನಿಲ್ಲ

ಸಾಹಸ ಸಿನಿಮಾಗಳ ಮಾಂತ್ರಿಕ ಇನ್ನು ನೆನಪು ಮಾತ್ರ…

ಚಿತ್ರರಂಗದ ಬಹುಮುಖ ಪ್ರತಿಭೆ ಎ. ಟಿ. ರಘು ನಿಧನ

ಬೆಂಗಳೂರು, (ಮಾ. 21, 2025): ಕನ್ನಡ ಚಿತ್ರರಂಗದಲ್ಲಿ ಸಾಹಸ ಪ್ರಧಾನ ಸಿನೆಮಾಗಳಿಗೆ ಹೆಸರಾಗಿದ್ದ, ರೆಬೆಲ್ ಸ್ಟಾರ್ ಅಂಬರೀಶ್ ಅಭಿನಯದ ‘ಮಂಡ್ಯದ ಗಂಡು’ ಸಿನೆಮಾ ನಿರ್ದೇಶಿಸಿದ್ದ ಸ್ಯಾಂಡಲ್‌ವುಡ್‌ನ ಖ್ಯಾತ ನಿರ್ದೇಶಕ ಎ. ಟಿ. ರಘು (ಅಪಡಾಂಡ ಟಿ. ರಘು) ಗುರುವಾರ (ಮಾ. 20) ರಾತ್ರಿ ನಿಧನರಾಗಿದ್ದಾರೆ.

76 ವರ್ಷ ವಯಸ್ಸಿನ ಎ. ಟಿ. ರಘು ಕಳೆದ ಕೆಲ ವರ್ಷಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದರು. ಜೊತೆಗೆ ಡಯಾಲಿಸಿಸ್ ಮಾಡಿಸಿಕೊಳುತ್ತಿದ್ದರು. ಕೆಲ ದಿನಗಳಿಂದ ರಘು ಎ. ಟಿ. ರಘು ಅವರ ಆರೋಗ್ಯದಲ್ಲಿ ಸಾಕಷ್ಟು ಏರುಪೇರಾಗುತ್ತಿದ್ದು, ವೈದ್ಯರಿಂದ ಚಿಕಿತ್ಸೆಗೂ ಒಳಗಾಗಿದ್ದರು. ಆದರೆ ಮಾ. 20ರ ಗುರುವಾರ ರಾತ್ರಿ 9.20 ರ ಸುಮಾರಿಗೆ ಚಿಕಿತ್ಸೆ ಫಲಕಾರಿಯಾಗದೆ ಎ. ಟಿ. ರಘು ಕೊನೆಯುಸಿರೆಳೆದರು ಎಂದು ಕುಟುಂಬ ಮೂಲಗಳು ತಿಳಿಸಿವೆ. ಮೃತರು ಎ. ಟಿ. ರಘು ಪತ್ನಿ, ಮಗಳು ಹಾಗೂ ಅಪಾರ ಅಭಿಮಾನಿಗಳನ್ನು ಅಗಲಿದ್ದು, ಆರ್‌. ಟಿ ನಗರದ ಮಠದಹಳ್ಳಿಯಲ್ಲಿ ಪಾರ್ಥಿವ ಶರೀರದ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದ್ದು, ಶುಕ್ರವಾರ (ಮಾ. 21) ಮಧ್ಯಾಹ್ನ 3 ಗಂಟೆಯೊಳಗೆ ಹೆಬ್ಬಾಳದ ಚಿತಾಗಾರದಲ್ಲಿ ಮೃತರ ಅಂತ್ಯಕ್ರಿಯೆ ನೆರವೇರಿಸಲಾಗುತ್ತದೆ ಎಂದು ಕುಟುಂಬ ಮೂಲಗಳು ತಿಳಿಸಿವೆ.

ನಿರ್ದೇಶಕ ಅಪಡಾಂಡ ಟಿ. ರಘು ಕೊಡಗಿನ ಕುವರ 

ಮೂಲತಃ ಕೊಡಗಿನವರಾದ ಎ. ಟಿ. ರಘು (ಅಪಡಾಂಡ ಟಿ. ರಘು) ಅವರು ಚಲನಚಿತ್ರರಂಗದಲ್ಲಿ ಸುಮಾರು 60 ವರ್ಷಗಳಿಂದ ಬಹುಭಾಷೆಯಲ್ಲಿ ಸೇವೆ ಸಲ್ಲಿಸಿದ್ದು, ಸುಮಾರು 40 ಚಿತ್ರಗಳನ್ನು ನಿರ್ದೇಶಿಸಿದ್ದಾರೆ. ಅದರಲ್ಲೂ ರೆಬೆಲ್ ಸ್ಟಾರ್ ಅಂಬರೀಶ್ ಅಭಿನಯದ ಬರೋಬ್ಬರಿ 28 ಸಿನೆಮಾಗಳನ್ನು ನಿರ್ದೇಶಿಸಿದ್ದ ಹೆಗ್ಗಳಿಕೆ ರಘು ಅವರದ್ದು. ಕನ್ನಡ ಚಿತ್ರರಂಗದಲ್ಲಿ ಬರಹಗಾರನಾಗಿ, ನಿರ್ದೇಶಕನಾಗಿ, ನಿರ್ಮಾಪಕನಾಗಿ, ನಟನಾಗಿ ಹೀಗೆ ಎಲ್ಲಾ ವಿಭಾಗದಲ್ಲೂ ತನ್ನದೇ ಆದ ಛಾಪು ಮೂಡಿಸಿದ್ದ ಎ. ಟಿ ರಘು, ಕೆಲವು ವರ್ಷಗಳಿಂದ ಅನಾರೋಗ್ಯದಿಂದಾಗಿ ತೆರೆಮರೆಗೆ ಸರಿದಿದ್ದರು. ‘ಮಂಡ್ಯದ ಗಂಡು’, ‘ಮಿಡಿದ ಹೃದಯಗಳು’, ‘ಜೈಲರ್ ಜಗನ್ನಾಥ್’, ‘ಬೇಟೆಗಾರ’, ‘ಧರ್ಮ ಯುದ್ಧ’, ‘ನ್ಯಾಯ ನೀತಿ ಧರ್ಮ’ ಹೀಗೆ 80-90ರ ದಶಕದ ಅನೇಕ ಸೂಪರ್‌ ಹಿಟ್‌ ಸಿನೆಮಾಗಳನ್ನು ನಿರ್ದೇಶಿಸಿದ ಖ್ಯಾತಿ ಎ. ಟಿ. ರಘು ಅವರಿಗೆ ಸಲ್ಲುತ್ತದೆ.

ಎ. ಟಿ. ರಘು ನಿಧನಕ್ಕೆ ಕಂಬನಿ ಮಿಡಿದ ಚಿತ್ರರಂಗದ ಗಣ್ಯರು

ಹಿರಿಯ ನಿರ್ದೇಶಕ ಎ. ಟಿ. ರಘು ಅವರ ನಿಧನಕ್ಕೆ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ, ಕರ್ನಾಟಕ ಚಲನಚಿತ್ರ ನಿರ್ದೇಶಕರ ಸಂಘ, ಕನ್ನಡ ಚಲನಚಿತ್ರ ನಿರ್ಮಾಪಕರ ಸಂಘ ಸೇರಿದಂತೆ ಚಿತ್ರರಂಗದ ಅನೇಗ ಸಂಘ-ಸಂಸ್ಥೆಗಳು, ಚಿತ್ರರಂಗದ ಹಲವು ಗಣ್ಯರು ಕಂಬನಿ ಮಿಡಿದು, ಶ್ರದ್ಧಾಂಜಲಿ ಅರ್ಪಿಸಿದ್ದಾರೆ.

Related Posts

error: Content is protected !!