Pop Corner

‘ವೇಷಗಳು’ ಟೈಟಲ್ ಲಾಂಚ್

ಸಿನೆಮಾ ರೂಪದಲ್ಲಿ ರವಿ ಬೆಳಗೆರೆಯವರ ‘ಒಟ್ಟಾರೆ ಕಥೆಗಳು’ ಕೃತಿ

‘ವೇಷಗಳು’ ಟೈಟಲ್ ಲಾಂಚ್ ಮಾಡಿದ‌ ರವಿ ಬೆಳಗೆರೆ ಪುತ್ರಿ ಭಾವನಾ ಬೆಳಗೆರೆ

‘ವೇಷಗಳು’ ಸಿನೆಮಾಗೆ ಹಾರೈಸಿದ ಭಾವನಾ ಬೆಳಗೆರೆ

ಕನ್ನಡ ಪತ್ರಿಕೋದ್ಯಮದ ‘ರೆಬಲ್‌ ಸ್ಟಾರ್’ ರವಿ ಬೆಳಗೆರೆ ಇಂದು ದೈಹಿಕವಾಗಿ‌ ಇಲ್ಲ. ಆದರೆ ರವಿ ಬೆಳಗೆರೆ ಅವರ ಬರಹಗಳು, ಕೃತಿಗಳು ಎಲ್ಲವನ್ನೂ ಅವರ ಅಭಿಮಾನಿಗಳು ಇಂದಿಗೂ ಆಸ್ವಾಧಿಸುತ್ತಲೇ ಇರುತ್ತಾರೆ. ಅಕ್ಷರ ಮಾಂತ್ರಿಕ ರವಿ ಬೆಳಗೆರೆಯವರ ಒಂದೊಂದು ಪುಸ್ತಕವೂ ಅದರದ್ದೇ ಆದ ಕಲ್ಪನಾಲೋಕಕ್ಕೆ ನಮ್ಮನ್ನು ಕರೆದುಕೊಂಡು ಹೋಗಿ ಬಿಡುತ್ತದೆ. ಇಷ್ಟು ದಿನ ಅವರ ಪುಸ್ತಕಗಳನ್ನು ಓದಿ, ಅವರ ಸಾಹಿತ್ಯಿಕ ಜಗತ್ತಿನಲ್ಲಿ ಸಂಚರಿಸುತ್ತಿದ್ದವರಿಗೆ ಇಲ್ಲೊಂದು ಸಿಹಿ ಸುದ್ದಿಯಿದೆ. ರವಿ ಬೆಳಗೆರೆಯವರ ಜನಪ್ರಿಯ ಕೃತಿಯೊಂದು ಈಗ ಸಿನೆಮಾ ರೂಪದಲ್ಲಿ ಪ್ರೇಕ್ಷಕರ ಮುಂದೆ ಬರುವ ತಯಾರಿಯಲ್ಲಿದೆ. ಹೌದು, ರವಿ ಬೆಳಗೆರೆಯವರ ‘ಒಟ್ಟಾರೆ ಕಥೆಗಳು’ ಕಥಾಸಂಕಲನದಿಂದ ಆಯ್ದ ಕಥೆ ‘ವೇಷಗಳು’ ಈಗ ಸಿನೆಮಾವಾಗಿ ಬೆಳ್ಳಿತೆರೆಗೆ ಬರುತ್ತಿದೆ. ಹೊಸಬರ ಚಿತ್ರತಂಡವೊಂದು ಬೆಳ್ಳಿತೆರೆಯ ಮೇಲೆ ಆ ಲೋಕವನ್ನೇ ಸೃಷ್ಟಿಸಲು ಹೊರಟಿದೆ.

‘ವೇಷ’ ಹಾಕೋಕೆ ರೆಡಿಯಾದ ಹೊಸಬರ ತಂಡ

ರವಿ ಬೆಳಗೆರೆಯವರ ಕಥೆಯನ್ನು ‘ವೇಷಗಳು’ ಎಂಬ ಹೆಸರಿನಲ್ಲಿ ಸಿನೆಮಾವಾಗಿ ತೆರೆಗೆ ತರಲು ಹೊರಟಿರುವವರು ಕಿಶನ್‌ ರಾವ್‌ ದಳವಿ. ಈಗಾಗಲೇ ಈ ಸಿನೆಮಾದ ಬಹುತೇಕ ಪ್ರೀ-ಪ್ರೊಡಕ್ಷನ್‌ ಕೆಲಸಗಳು ಪೂರ್ಣಗೊಂಡಿದ್ದು, ಇತ್ತೀಚೆಗಷ್ಟೇ ‘ವೇಷಗಳು’ ಸಿನೆಮಾದ ಟೈಟಲ್‌ ಅನಾವರಣವಾಗಿದೆ. ರವಿ ಬೆಳಗೆರೆಯವರ ಪುತ್ರಿ ಪ್ರಸ್ತುತ ‘ಹಾಯ್ ಬೆಂಗಳೂರು’ ವಾರ ಪತ್ರಿಕೆಯ ಸಂಪಾದಕಿಯೂ ಆಗಿರುವ ಭಾವನಾ ಬೆಳಗೆರೆ ಹಾಗೂ ಅವರ ಪತಿ ನಟ ಶ್ರೀನಗರ ಕಿಟ್ಟಿ ‘ವೇಷಗಳು’ ಸಿನೆಮಾದ ಟೈಟಲ್ ಲಾಂಚ್ ಮಾಡಿ, ಹೊಸಬರ ತಂಡಕ್ಕೆ ಶುಭ ಹಾರೈಸಿದರು.

ರಂಗ ಪ್ರತಿಭೆಯ ಹೊಸ ಕನಸು…

ಇನ್ನು ಕಿಶನ್ ರಾವ್ ದಳವಿ ಮೂಲತಃ ರಂಗಭೂಮಿ ಪ್ರತಿಭೆ. ರವಿ ಬೆಳಗೆರೆಯವರ ಅಪ್ಪಟ ಅಭಿಮಾನಿಯಾಗಿರುವ ಕಿಶನ್‌ ರಾವ್‌ ದಳವಿ, ತಮ್ಮ ಗುರುಗಳ ಕಥೆಯನ್ನೇ ಸಿನೆಮಾ ಮಾಡುತ್ತಿರುವುದಕ್ಕೆ ತುಂಬಾ ಖುಷಿಪಟ್ಟಿದ್ದಾರೆ. ಅಷ್ಟೆ ಅಲ್ಲ ಭಾವನ ಬೆಳಗೆರೆಯವರು ನೀಡಿದ ಪ್ರೋತ್ಸಾಹಕ್ಕೂ ಸಂತಸ ವ್ಯಕ್ತಪಡಿಸಿದ್ದಾರೆ.  ಈಗಾಗಲೇ ಕನ್ನಡದಲ್ಲಿ ಒಂದಷ್ಟು ಸಿನೆಮಾಗಳಲ್ಲಿ ನಟರಾಗಿ, ಸಹ-ನಿರ್ದೇಶಕರಾಗಿ ಕೆಲಸ ಮಾಡಿದ ಅನುಭವವಿರುವ ಕಿಶನ್‌ ರಾವ್‌ ದಳವಿ ಈಗ ‘ವೇಷಗಳು’ ಸಿನೆಮಾಕ್ಕೆ ನಿರ್ದೇಶನ ಮಾಡಿ ಅದನ್ನು ತೆರೆಮೇಲೆ ತರುವ ಸಾಹಸಕ್ಕೆ ಕೈ ಹಾಕಿದ್ದಾರೆ.

ಭಾರತದ ವೈವಿಧ್ಯ ‘ವೇಷಗಳ’ ಅನಾವರಣ…

‘ಗ್ರೀನ್ ಟ್ರೀ ಸ್ಟೂಡಿಯೋಸ್’ ಬ್ಯಾನರಿನ ಚೊಚ್ಚಲ ಸಿನೆಮಾವಾಗಿ ‘ವೇಷಗಳು’ ಸಿನೆಮಾವನ್ನು ಸ್ವತಃ ಕಿಶನ್ ರಾವ್ ದಳವಿಯವರೇ ನಿರ್ಮಾಣ ಮಾಡುತ್ತಿದ್ದಾರೆ. ಭಾರತದ ವೈವಿಧ್ಯಮಯ ಸಂಗೀತ, ಸಂಸ್ಕೃತಿಗಳ ಪರಿಚಯವನ್ನು ‘ವೇಷಗಳು’ ಸಿನೆಮಾದಲ್ಲಿ ತೋರಿಸಲು ಹೊರಟಿರುವ ನಿರ್ದೇಶಕರು ಉತ್ತರಪ್ರದೇಶ, ಉತ್ತರಾಖಂಡ್, ಮಹಾರಾಷ್ಟ್ರ ಮತ್ತು ಕರ್ನಾಟಕ ಮುಂತಾದ ರಾಜ್ಯಗಳಲ್ಲಿ ಚಿತ್ರೀಕರಣ ನಡೆಸಲು ಪ್ಲ್ಯಾನ್ ಮಾಡಿದ್ದಾರೆ. ನಟ ಕಡ್ಡಿ ವಿಶ್ವ ತಮ್ಮ ಗೆಳೆಯ ಕಿಶನ್ ರಾವ್ ದಳವಿಯವರ ಪ್ರಥಮ ನಿರ್ದೇಶನದ ಚಿತ್ರಕ್ಕೆ ಶುಭ ಹಾರೈಸಿದ್ದಾರೆ. ‘ವೇಷಗಳು’ ಚಿತ್ರಕ್ಕೆ ಅಂಜನ್ ಕುಮಾರ್ ಛಾಯಾಗ್ರಹಣವಿದ್ದು, ಅಕ್ಷಯ್ ಪಿ. ರಾವ್ ಸಂಕಲನ ಕಾರ್ಯ ನಿರ್ವಹಿಸುತ್ತಿದ್ದಾರೆ. ಚಿತ್ರಕ್ಕೆ ಗುರುರಾಜ ಎಂ. ದೇಸಾಯಿಯವರ ಸಂಭಾಷಣೆಯಿದ್ದು, ಕೌಶಿಕ್ ಹರ್ಷ ಈ ಚಿತ್ರದ ಹಾಡುಗಳಿಗೆ ಸಂಗೀತ ಸಂಯೋಜಿಸುತ್ತಿದ್ದಾರೆ. ಎಲ್ಲ ಅಂದುಕೊಂಡಂತೆ ನಡೆದರೆ, ಈ ವರ್ಷದ ಕೊನೆಗೆ ‘ವೇಷಗಳು’ ಸಿನೆಮಾವನ್ನು ಪ್ರೇಕ್ಷಕರ ಮುಂದೆ ತರುವ ಯೋಜನೆಯಲ್ಲಿದೆ ಚಿತ್ರತಂಡ.

Related Posts

error: Content is protected !!