ನಟಿ ಹರ್ಷಿಕಾ ಪೂಣಚ್ಚ ಈಗ ನಿರ್ದೇಶಕಿ!

ನಟಿ ಹರ್ಷಿಕಾ ಪೂಣಚ್ಚ ಚೊಚ್ಚಲ ನಿರ್ದೇಶನದ ಚಿತ್ರ
‘ಚಿ: ಸೌಜನ್ಯ’ – ‘ಒಂದು ಹೆಣ್ಣಿನ ಕಥೆ’ ಪೋಸ್ಟರ್ ಬಿಡುಗಡೆ!
ನಟನೆಯಿಂದ ನಿರ್ದೇಶನದತ್ತ ಹರ್ಷಿಕಾ ಚಿತ್ತ…
ಕನ್ನಡ ಚಿತ್ರರಂಗದಲ್ಲಿ ನಟಿಯಾಗಿ ಗುರುತಿಸಿಕೊಂಡಿರುವ ಹರ್ಷಿಕಾ ಪೂಣಚ್ಚ, ಸಿನೆಮಾದ ಜೊತೆ ಜೊತೆಗೆ ಸಾಮಾಜಿಕ ಕೆಲಸಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳುವ ನಟಿ. ಕನ್ನಡದ ಜೊತೆಗೆ ಬೇರೆ ಭಾಷೆಗಳಲ್ಲೂ ನಟಿಯಾಗಿ ಅಭಿನಯಿಸಿರುವ ಹರ್ಷಿಕಾ ಪೂಣಚ್ಚ, ಈಗ ಸಿನೆಮಾವೊಂದಕ್ಕೆ ಆಕ್ಷನ್-ಕಟ್ ಹೇಳುವ ತಯಾರಿಯಲ್ಲಿದ್ದಾರೆ. ಹೌದು, ಹರ್ಷಿಕಾ ಪೂಣಚ್ಚ ಈಗ ನಟಿಯಿಂದ ನಿರ್ದೇಶಕಿಯಾಗಿ ಬಡ್ತಿ ಪಡೆಯುತ್ತಿದ್ದು, ಇತ್ತೀಚೆಗೆ ತಮ್ಮ ಚೊಚ್ಚಲ ಸಿನೆಮಾದ ಟೈಟಲ್ ಅನ್ನು ಹರ್ಷಿಕಾ ಅನಾವರಣಗೊಳಿಸಿದ್ದಾರೆ.
‘ಒಂದು ಹೆಣ್ಣಿನ ಕಥೆ’ಗೆ ಚಿತ್ರರೂಪ…
ಇನ್ನು ಹರ್ಷಿಕಾ ಪೂಣಚ್ಚ ನಿರ್ದೇಶನ ಮಾಡುತ್ತಿರುವ ಹೊಸ ಸಿನೆಮಾಕ್ಕೆ ‘ಚಿ: ಸೌಜನ್ಯ’ ಎಂದು ಹೆಸರಿಡಲಾಗಿದ್ದು, ಈ ಸಿನೆಮಾದ ಟೈಟಲ್‌ಗೆ ‘ಒಂದು ಹೆಣ್ಣಿನ ಕಥೆ’ ಎಂಬ ಅಡಿಬರಹವಿದೆ. ಸಸ್ಪೆನ್ಸ್ ಕಂ ಕ್ರೈಂ-ಥ್ರಿಲ್ಲರ್ ಶೈಲಿಯಲ್ಲಿ ಈ ಸಿನೆಮಾ ತೆರೆಗೆ ಬರುತ್ತಿದ್ದು, ಹರ್ಷಿಕಾ ಪೂಣಚ್ಚ ಪತಿ, ನಟ ಭುವನ್ ಪೊನ್ನಣ್ಣ ಅವರ ‘ಭುವನ್ ಎಂಟರ್‌ಟೈನ್ಮೆಂಟ್’ ಬ್ಯಾನರಿನಲ್ಲಿ ಮತ್ತು’ಮಧು ಕಂಸಾಳೆ ಫಿಲಂಸ್’ ಬ್ಯಾನರ್ ನಲ್ಲಿ ಗಣೇಶ್ ಮಹಾದೇವ್ ಈ ಸಿನೆಮಾಕ್ಕೆ ಬಂಡವಾಳ ಹೂಡಿ ನಿರ್ಮಿಸುತ್ತಿದ್ದಾರೆ.
ಹೊರಬಂತು ‘ಚಿ: ಸೌಜನ್ಯ’ ಚಿತ್ರದ ಡಿಜಿಟಲ್ ಪೋಸ್ಟರ್
ಇತ್ತೀಚೆಗೆ ‘ಚಿ: ಸೌಜನ್ಯ’ ಸಿನೆಮಾದ ಡಿಜಿಟಲ್ ಪೋಸ್ಟರ್ ಹಾಗು ಟೈಟಲ್ ಬಿಡುಗಡೆಯಾಯಿತು. ನಟ ಕಿಶೋರ್ ‘ಚಿ: ಸೌಜನ್ಯ’ ಸಿನೆಮಾದ ಮುಖ್ಯ ಭೂಮಿಕೆಯಲ್ಲಿ ಕಾಣಿಸಿಕೊಳ್ಳಲಿದ್ದು, ಈ ಸಿನೆಮಾದಲ್ಲಿ ಇಬ್ಬರು ನಾಯಕಿಯರು ಇರಲಿದ್ದಾರಂತೆ. ಸದ್ಯ ನಾಯಕಿಯರ ಹುಡುಕಾಟ ಶುರುವಾಗಿದ್ದು, ಖಳನಟರಾಗಿ ಉಗ್ರಂ ಮಂಜು, ಕಾಕ್ರೊಚ್ ಸುಧೀರ್ ಮತ್ತಿತರರು ಕಾಣಿಸಿಕೊಳ್ಳಲಿದ್ದಾರೆ ಎಂಬುದು ಚಿತ್ರತಂಡ ನೀಡಿರುವ ಮಾಹಿತಿ. ಸದ್ಯ ‘ಚಿ: ಸೌಜನ್ಯ’ ಸಿನೆಮಾದ ಬಹುತೇಕ ಸ್ಕ್ರಿಪ್ಟ್ ಕೆಲಸ ಮುಗಿದಿದ್ದು, ಮುಂದಿನ ಏಪ್ರಿಲ್ ತಿಂಗಳಿನಲ್ಲಿ ಈ ಸಿನೆಮಾದ ಶೂಟಿಂಗ್ ಆರಂಭಿಸುವ ತಯಾರಿಯಲ್ಲಿದೆ ಚಿತ್ರತಂಡ. ಉಳಿದಂತೆ ‘ಚಿ: ಸೌಜನ್ಯ’ ಸಿನೆಮಾದ ಇನ್ನಿತರ ಮಾಹಿತಿಗಳನ್ನು ಮುಂದಿನ ದಿನಗಳಲ್ಲಿ ಹೊರಬರಬೇಕಿದೆ.