ಹಿರಿಯ ಹಾಸ್ಯ ನಟ ಬ್ಯಾಂಕ್ ಜನಾರ್ಧನ್ ನಿಧನ

ಪ್ರೇಕ್ಷಕರನ್ನು ನಗಿಸಿ ಮರೆಯಾದ ಬ್ಯಾಂಕ್ ಜನಾರ್ಧನ್
ಅನಾರೋಗ್ಯದಿಂದ ನಿಧನರಾದ 76 ವರ್ಷ ವಯಸ್ಸಿನ ಹಿರಿಯ ನಟ
ಹಿರಿಯ ನಟನ ಅಗಲಿಕೆಗೆ ಚಿತ್ರರಂಗದ ಗಣ್ಯರ ಕಂಬನಿ
ಏ. 14, 2025, ಬೆಂಗಳೂರು: ಕನ್ನಡ ಚಿತ್ರರಂಗದ ಹಿರಿಯ ನಟ, ಸುಮಾರು 800ಕ್ಕೂ ಹೆಚ್ಚು ಕನ್ನಡ ಸಿನಿಮಾಗಳಲ್ಲಿ ಜನರನ್ನು ನಕ್ಕು-ನಲಿಸಿದ್ದ ಹಾಸ್ಯ ನಟ ಬ್ಯಾಂಕ್ ಜನಾರ್ಧನ್ (76) ನಿಧನರಾಗಿದ್ದಾರೆ. ಹಲವು ದಿನಗಳಿಂದ ಬ್ಯಾಂಕ್ ಜನಾರ್ಧನ್ ಅನಾರೋಗ್ಯದಿಂದ ಬಳಲುತ್ತಿದ್ದು, ಈ ಹಿಂದೆ ಮೂರು ಬಾರಿ ಅವರಿಗೆ ಹೃದಯಾಘಾತ ಸಂಭವಿಸಿತ್ತು. ಹೆಚ್ಚಿನ ಚಿಕಿತ್ಸೆಗಾಗಿ ಅವರನ್ನ ಮಣಿಪಾಲ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಬ್ಯಾಂಕ್ ಜನಾರ್ಧನ್, ಸೋಮವಾರ (ಏ. 14) ಮುಂಜಾನೆ 2.30ರ ಸುಮಾರಿಗೆ ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ ಎಂದು ಅವರ ಕುಟುಂಬದ ಮೂಲಗಳು ತಿಳಿಸಿವೆ.
ಸುಲ್ತಾನ್ ಪಾಳ್ಯದ ನಿವಾಸದಲ್ಲಿರುವ ಬ್ಯಾಂಕ್ ಜನಾರ್ಧನ್ ನಿವಾಸದಲ್ಲಿ ಪಾರ್ಥೀವ ಶರೀರ ಇಡಲಾಗಿದ್ದು, ಸೋಮವಾರ (ಏ. 14) ಬೆಳಗ್ಗೆ 10 ಗಂಟೆಯಿಂದ ಬಂಧುಗಳು, ಅಭಿಮಾನಿಗಳು ಮತ್ತು ಸಾರ್ವಜನಿಕರ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿತ್ತು. ಅದಾದ ಬಳಿಕ ಅಂತಿಮ ಕ್ರಿಯೆ ನೆರವೇರಿಸಲಾಯಿತು.
ಚಿತ್ರದುರ್ಗದಿಂದ ಚಿತ್ರರಂಗದತ್ತ…
ನಟ ಬ್ಯಾಂಕ್ ಜನಾರ್ಧನ್ ಮೂಲತಃ ಚಿತ್ರದುರ್ಗದವರು. 1949ರಲ್ಲಿ ಚಿತ್ರದುರ್ಗ ಜಿಲ್ಲೆಯ ಹೊಳಲ್ಕೆರೆಯಲ್ಲಿ ಜನಿಸಿದವರು ಬ್ಯಾಂಕ್ ಜನಾರ್ಧನ್. ಶಾಲಾ ಶಿಕ್ಷಣವನ್ನ ಹುಟ್ಟೂರಲ್ಲೇ ಪಡೆದ ಜನಾರ್ಧನ್ ಆನಂತರ ಬ್ಯಾಂಕ್‌ನಲ್ಲಿ ಕೆಲಸ ಆರಂಭಿಸಿದರು. ಶಾಲಾ – ಕಾಲೇಜಿನಲ್ಲಿ ಓದುತ್ತಿದ್ದ ದಿನಗಳಲ್ಲೇ ಜನಾರ್ಧನ್ ಅವರಿಗೆ ನಾಟಕದ ಗೀಳು ಅಂಟಿತ್ತು. ಹಲವು ನಾಟಕಗಳಲ್ಲಿ ಅಭಿನಯಿಸಿದ ನಂತರ ಬ್ಯಾಂಕ್ ಜನಾರ್ಧನ್ 1985ರಲ್ಲಿ ‘ಪಿತಾಮಹ’ ಚಿತ್ರದ ಮೂಲಕ ಚಿತ್ರರಂಗಕ್ಕೆ ಕಾಲಿಟ್ಟರು.
ಕಳೆದ 40 ವರ್ಷಗಳಿಂದ ಚಿತ್ರರಂಗದಲ್ಲಿ ಸಕ್ರಿಯವಾಗಿದ್ದರು. ಕನ್ನಡ ಸಿನಿಮಾ, ಕಿರುತೆರೆ ಮತ್ತು ರಂಗಭೂಮಿಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದ ಜನಾರ್ಧನ್, ಹಾಸ್ಯ ನಟರಾಗಿ ಸಾಕಷ್ಟು ಪಾತ್ರಗಳನ್ನು ನಿರ್ವಹಿಸಿದ್ದಾರೆ. 1980, 90ರ ದಶಕದ ಬಹುಬೇಡಿಕೆ ಹೊಂದಿದ್ದ ಹಾಸ್ಯನಟರಲ್ಲಿ ಒಬ್ಬರಾದ ಜನಾರ್ಧನ್ ಉಪೇಂದ್ರ ನಿರ್ದೇಶನದ ‘ಶ್’, ‘ತರ್ಲೆ ನನ್ ಮಗ’, ‘ಬೆಳ್ಳಿಯಪ್ಪ ಬಂಗಾರಪ್ಪ’, ‘ಗಣೇಶ ಸುಬ್ರಹ್ಮಣ್ಯ’, ‘ಬೆಟ್ಟದ ತಾಯಿ’, ‘ಪೊಲೀಸ್ ಹೆಂಡತಿ’, ‘ಸೂಪರ್ ನನ್ ಮಗ’, ‘ಭಂಡ ನನ್ ಗಂಡ’ ಮುಂತಾದ ಹಲವು ಸಿನೆಮಾಗಳಲ್ಲಿ ಹಾಸ್ಯದ ಹೊಳೆ ಹರಿಸಿದ್ದಾರೆ.
ಕನ್ನಡ ಚಿತ್ರರಂಗದಲ್ಲಿ ಶಂಕರ್ ನಾಗ್, ಅನಂತ್ ನಾಗ್, ರವಿಚಂದ್ರನ್, ಜಗ್ಗೇಶ್, ಶಿವರಾಜ್ ಕುಮಾರ್, ರಾಘವೇಂದ್ರ ರಾಜ್‌ಕುಮಾರ್ ಸೇರಿದಂತೆ ಅನೇಕ ಸ್ಟಾರ್ ನಟರ ಸಿನೆಮಾಗಳಲ್ಲಿ ಬ್ಯಾಂಕ್ ಜನಾರ್ಧನ್ ಹಾಸ್ಯ ನಟರಾಗಿ ಮಿಂಚಿದ್ದರು. ಬ್ಯಾಂಕ್ ಜನಾರ್ಧನ್ ನಿಧನದಿಂದ ಕನ್ನಡ ಚಿತ್ರರಂಗದ ಹಿರಿಯ ಕೊಂಡಿ ಕಳಚಿದಂತಾಗಿದೆ. ಬ್ಯಾಂಕ್ ಜನಾರ್ಧನ್ ನಿಧನಕ್ಕೆ ಕನ್ನಡ ಚಿತ್ರರಂಗದ ಅನೇಕ ತಾರೆಯರು, ಗಣ್ಯರು ಕಂಬನಿ ಮಿಡಿದಿದ್ದಾರೆ.