‘ಟಚ್ ಮಿ ನಾಟ್’ ವೆಬ್ ಸರಣಿಯಲ್ಲಿ ದೀಕ್ಷಿತ್ ಶೆಟ್ಟಿ

Jio Hotstar ನಲ್ಲಿ Touch me not ರಿಲೀಸ್
ಗಡಿದಾಟಿದ ಕನ್ನಡ ಪ್ರತಿಭೆ ದೀಕ್ಷಿತ್ ಶೆಟ್ಟಿ ಮತ್ತೊಂದು ಮೈಲಿಗಲ್ಲು
ವೆಬ್ ಸೀರಿಸ್ ನಲ್ಲೂ ಛಾಪನ್ನೊತ್ತಿದ್ದ ದೀಕ್ಷಿತ್ ಶೆಟ್ಟಿ
‘ದಿಯಾ’ ಸಿನೆಮಾದ ಮೂಲಕ ಕನ್ನಡ ಸಿನಿ ಪ್ರೇಕ್ಷಕರಿಗೆ ಪರಿಚಯವಾದ ನಟ ದೀಕ್ಷಿತ್ ಶೆಟ್ಟಿ. ಮೊದಲ ಸಿನೆಮಾದಲ್ಲೇ ನೋಡುಗರ ಮನ, ಗಮನ ಎರಡನ್ನೂ ಸೆಳೆಯುವಲ್ಲಿ ಯಶಸ್ವಿಯಾದ ದೀಕ್ಷಿತ್ ಶೆಟ್ಟಿ, ಈಗ ಕನ್ನಡದ ಜೊತೆಗೆ ಪರ ಭಾಷೆಯ ಸಿನೆಮಾಗಳಲ್ಲೂ ನಿಧಾನವಾಗಿ ಬಿಝಿಯಾಗುತ್ತಿದ್ದಾರೆ.
ಕಳೆದ ವರ್ಷ ಕನ್ನಡದಲ್ಲಿ ದೀಕ್ಷಿತ್ ಶೆಟ್ಟಿ ಅಭಿನಯಿಸಿದ್ದ ‘ಬ್ಲಿಂಕ್’ ಮತ್ತು ‘ಕೆ.ಟಿ.ಎಂ’ ಎಂಬ ಎರಡು ಸಿನೆಮಾಗಳು ಬಿಡುಗಡೆಯಾಗಿದ್ದವು. ಈ ಸಿನೆಮಾಗಳು ಬಾಕ್ಸಾಫೀಸ್‌ನಲ್ಲಿ ಹೇಳಿಕೊಳ್ಳುವ ಮಟ್ಟಿಗೆ ಯಶಸ್ಸು ಕಾಣದಿದ್ದರೂ, ಈ ಎರಡೂ ಸಿನೆಮಾಗಳು ನಾಯಕ ನಟ ದೀಕ್ಷಿತ್ ಶೆಟ್ಟಿ ಅವರಿಗೆ ಸಾಕಷ್ಟು ಹೆಸರು ತಂದುಕೊಟ್ಟಿದ್ದವು. ಅದಾದ ಬಳಿಕ ದೀಕ್ಷಿತ್ ಶೆಟ್ಟಿ ಮೊದಲ ಬಾರಿಗೆ ತೆಲುಗಿನಲ್ಲಿ ಅಭಿನಯಿಸಿದ್ದ ‘ದಸರಾ’ ಸಿನೆಮಾ ಕೂಡ, ಕನ್ನಡದ ಈ ನಟನನ್ನು ಇಡೀ ಸೌತ್ ಸಿನಿ ದುನಿಯಾಕ್ಕೆ ಪರಿಚಯಿಸಿತ್ತು. ಅದಾದ ಬಳಿಕ ದೀಕ್ಷಿತ್ ಶೆಟ್ಟಿ ತೆಲುಗಿನಲ್ಲಿ ‘ಮುಗ್ಗುರು ಮೊನಗಾಳ್ಳು’ ಸಿನೆಮಾದ ಪಾತ್ರದಿಂದ ತೆಲುಗು ಸಿನಿಪ್ರಿಯರ ಗಮನ ಸೆಳೆಯುವಲ್ಲಿ ಯಶಸ್ವಿಯಾಗಿದ್ದರು.
ರಿಲೀಸ್‌ಗೆ ರೆಡಿಯಾಗಿವೆ ಬ್ಯಾಕ್ ಟು ಬ್ಯಾಕ್ ಸಿನೆಮಾಗಳು…
ಸದ್ಯ ದೀಕ್ಷಿತ್ ಶೆಟ್ಟಿ ತೆಲುಗಿನಲ್ಲಿ ಅಭಿನಯಿಸಿರುವ ‘KJQ’ ಮತ್ತು ರಶ್ಮಿಕಾ ಮಂದಣ್ಣ ಜೊತೆ ಜೋಡಿಯಾಗಿ ಅಭಿನಯಿಸಿರುವ ‘ದಿ ಗರ್ಲ್ ಫ್ರೆಂಡ್’ ಚಿತ್ರಗಳು ಬಿಡುಗಡೆಗೆ ರೆಡಿಯಾಗಿದ್ದು, ಈ ವರ್ಷದ ಕೊನೆಗೆ ಈ ಎರಡೂ ತೆಲುಗು ಸಿನೆಮಾಗಳು ತೆರೆಗೆ ಬರುವ ಸಾಧ್ಯತೆಯಿದೆ. ಇದರೊಂದಿಗೆ ದೀಕ್ಷಿತ್ ಶೆಟ್ಟಿ ಕನ್ನಡದಲ್ಲಿ ಅಭಿನಯಿಸಿರುವ ‘ಬ್ಯಾಂಕ್ ಆಫ್ ಭಾಗ್ಯಲಕ್ಷ್ಮಿ’ ಸಿನೆಮಾ ಕೂಡ ಬರಲು ಸಿದ್ದವಾಗಿದ್ದು, ಎಲ್ಲ ಅಂದುಕೊಂಡಂತೆ ನಡೆದರೆ, ಈ ಸಿನೆಮಾ ಇದೇ ವರ್ಷ ಆಗಸ್ಟ್ ವೇಳೆಗೆ ತೆರೆಗೆ ಬರುವ ಸಾಧ್ಯತೆಯಿದೆ. ಇವೆಲ್ಲದರ ಜೊತೆಗೆ ತಮಿಳು ಹಾಗೂ ಮಲಯಾಳಂನ ಸಿನೆಮಾಗಳೂ ಸೆಟ್ಟೇರಿವೆ. ಈ ನಡುವೆ ‘ಬ್ಲಿಂಕ್’ ಡೈರೆಕ್ಟರ್ ಜೊತೆಗೆ ಮತ್ತೊಂದು ಹೊಸ ಸಿನೆಮಾ ಅನೌನ್ಸ್ ಮಾಡಿದ್ದಾರೆ ದೀಕ್ಷಿತ್ ಶೆಟ್ಟಿ.
ಸಿನೆಮಾ ಆಯ್ತು…, ಈಗ ವೆಬ್ ಸೀರಿಸ್‌ನತ್ತ ದೀಕ್ಷಿತ್ ಚಿತ್ತ…
ಇನ್ನು ಪೂರ್ಣ ಪ್ರಮಾಣದಲ್ಲಿ ನಟನಾಗಿ, ನಟನೆಯನ್ನೇ ಉಸಿರಾಗಿಸಿಕೊಂಡಿರೋ ದೀಕ್ಷಿತ್ ಶೆಟ್ಟಿ ಈಗ ಸಿನೆಮಾದಿಂದ ವೆಬ್ ಸೀರಿಸ್‌ನತ್ತ ಮುಖ ಮಾಡಿದ್ದಾರೆ. ಸದ್ಯ ದೀಕ್ಷಿತ್ ಶೆಟ್ಟಿ, ಇದೇ ಮೊದಲ ಬಾರಿಗೆ ವೆಬ್ ಸೀರಿಸ್ ಮೂಲಕ ಕಿರುತೆರೆಗೆ ಎಂಟ್ರಿಯಾಗಿದ್ದಾರೆ. ದೀಕ್ಷಿತ್ ಶೆಟ್ಟಿ ಅಭಿನಯದ ‘ಟಚ್ ಮಿ ನಾಟ್’ (Touch me Not) ಎಂಬ ಮೊದಲ ತೆಲುಗು ಮೂಲದ ವೆಬ್ ಸೀರಿಸ್ ಇತ್ತೀಚೆಗೆ ‘ಜಿಯೋ ಹಾಟ್ ಸ್ಟಾರ್’ ನಲ್ಲಿ ರಿಲೀಸ್ ಆಗಿದೆ.
ಕೂತೂಹಲ ಭರಿತ ಯುವಕನ ಪಾತ್ರದಲ್ಲಿ ದೀಕ್ಷಿತ್
ಇನ್ನು ‘ಟಚ್ ಮಿ ನಾಟ್’ (Touch me Not) ವೆಬ್ ಸೀರಿಸ್‌ನಲ್ಲಿ ತುಂಬ ವಿಭಿನ್ನ ಪಾತ್ರದಲ್ಲಿ ದೀಕ್ಷಿತ್ ಶೆಟ್ಟಿ ಕಾಣಿಸಿಕೊಂಡಿದ್ದಾರೆ. ಈ ವೆಬ್ ಸರಣಿಗಾಗಿ ಹರೆಯದ ಹುಡುಗನಂತಾಗಲೂ ಸಣ್ಣ ಆಗಿದ್ದ ದೀಕ್ಷಿತ್ ಶೆಟ್ಟಿ, ಇಡೀ ಸರಣಿಯಲ್ಲಿ ಹರೆಯದ ಹುಡುಗನಾಗಿ ಕಂಡಿದ್ದಾರೆ. ಸಿನೆಮಾದಲ್ಲಿ ಪಾತ್ರದಿಂದ ಪಾತ್ರಕ್ಕೆ ಬದಲಾಗುವ ಹಾಗೇ, ಈ ವೆಬ್ ಸೀರಿಸ್‌ಗಾಗಿ ದೈಹಿಕವಾಗಿ ಬದಲಾಗಿರುವ ದೀಕ್ಷಿತ್, ಹರೆಯದ ಹುಡುಗನಾಗಿ ಲವಲವಿಕೆಯ ಅಭಿನಯ ನೀಡಿದ್ದಾರೆ. ‘ಟಚ್ ಮಿ ನಾಟ್’ (Touch me Not) ವೆಬ್ ಸರಣಿಯಲ್ಲಿ ದೀಕ್ಷಿತ್ ಶೆಟ್ಟಿ ಪ್ರಮುಖ ಪಾತ್ರಧಾರಿಯಾಗಿದ್ದು, ಸರಣಿ ನೋಡಿದವರು ದೀಕ್ಷಿತ್ ಶೆಟ್ಟಿ ಅಭಿನಯವನ್ನು ನೋಡಿ ಮೆಚ್ಚುಗೆಯ ಮಾತುಗಳನ್ನಾಡುತ್ತಿದ್ದಾರೆ.